ಫುಟ್‍ಬಾಲ್ -
ಪ್ರತಿಯೊಂದು ತಂಡದಲ್ಲಿಯೂ 11 ಮಂದಿ ಆಟಗಾರರಿರುವ ಎರಡು ಎದುರಾಳಿ ತಂಡಗಳು ಆಟದ ಬಯಲಿನಲ್ಲಿ ತಮ್ಮ ತಮ್ಮ ಗೋಲುಗಳನ್ನು ರಕ್ಷಿಸುತ್ತ ಎದುರಾಳಿ ತಂಡದ ಗೋಲ್‍ಗೆ ಕಾಲ್ಚೆಂಡನ್ನು ಒದೆದು ದೂಡಿ ಅಥವಾ ಹೊಗಿಸಿ ಗೆಲ್ಲಂಕ ಗಳಿಸುವ ಆಟ. ಪ್ರಪಂಚವನ್ನೇ ವ್ಯಾಪಿಸಿರುವ ಒಂದು ಜನಪ್ರಿಯ ಆಟವಿದು. ಆಟಗಳ ರಾಜ ಎಂದು ಹೆಸರು ಪಡೆದಿದೆ. ಇದರದು ಎರಡು ಸಾವಿರ ವರ್ಷಗಳ ಇತಿಹಾಸ.

	ಹನ್ ಸಾಮ್ರಾಜ್ಯಕ್ಕೆ (ಕ್ರಿ.ಪೂ. 2100) ಸೇರಿದ ಚೀನದ ಯೋಧರು ಫುಟ್‍ಬಾಲ್ ಆಟವನ್ನು ಹೋಲುವ ತ್ಸು-ಚು ಎಂಬ ಆಟವನ್ನು ಆಡುತ್ತಿದ್ದರೆಂದು ತಿಳಿದು ಬಂದಿದೆ. ತ್ಸು ಎಂದರೆ ಕಾಲಿನಿಂದ ಒದೆಯುವುದೆಂದೂ ಚು ಎಂದರೆ ಚೆಂಡೆಂದೂ ಅರ್ಥ. ಪ್ರಾಚೀನ ಗ್ರೀಕರು ಮತ್ತು ರೋಮನರು ಫುಟ್‍ಬಾಲ್ ಆಟವನ್ನು ಹೋಲುವ ಹರ್‍ಪಾಸ್‍ಟಮ್ ಎಂಬ ಆಟವನ್ನು ಆಡುತ್ತಿದ್ದರು. ಮುಂದಿನ ದಿನಗಳಲ್ಲಿ ಈ ರೋಮನರಿಂದ ಇಂಗ್ಲೆಂಡ್ ದೇಶದಲ್ಲಿ ಪ್ರಚಾರಕ್ಕೆ ಬಂದಿತು. ಫುಟ್‍ಬಾಲ್ ಆಟದಿಂದ ಬಿಲ್ಲುಗಾರಿಕೆ ಆಟದ ಮಹತ್ತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣದಿಂದ ಎರಡನೆಯ ಹೆನ್ರಿ (1133-89) ದೊರೆ ಇದನ್ನು ಬಹಿಷ್ಕರಿಸಿದ. ಈ ಆಟ ಹೆಚ್ಚು ಅಪಾಯಕಾರಿ ಹಾಗೂ ಒರಟಾದ ಆಟವೆಂದು ಎರಡನೆಯ ಎಡ್ವರ್ಡ್(1284-1327) ಇದನ್ನು ನಿಷೇಧಿಸಲು ಪ್ರಯತ್ನಪಟ್ಟು ಸೋತ. 13ನೆಯ ಶತಮಾನದ ಅನಂತರ ಫುಟ್‍ಬಾಲ್ ಒಂದು ವ್ಯವಸ್ಥಿತ ಆಟವಾಯಿತು. 1800ರ ಹೊತ್ತಿಗೆ ಇದನ್ನು ಇಂಗ್ಲೆಂಡ್ ದೇಶದಲ್ಲಿ ಶಾಲಾ ಬಾಲಕರು ಆಡತೊಡಗಿದರು. ಈ ಆಟಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್, ಬ್ರೆಜಿûಲ್, ಸ್ಕಾಟ್ಲೆಂಡ್, ಅಮೆರಿಕ, ರಷ್ಯ ಮುಂತಾದ ರಾಷ್ಟ್ರಗಳಲ್ಲಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡುವು. ಸಾಕರ್ (ಅಸೋಸಿಯೇಷನ್ ಫುಟ್‍ಬಾಲ್), ರಗ್ಬಿ ಫುಟ್‍ಬಾಲ್, ಅಮೆರಿಕನ್ ಫುಟ್‍ಬಾಲ್, ಗ್ಯಾಲಿಕ್, ಕೆನೆಡಿಯನ್ ಮತ್ತು ಆಸ್ಟ್ರೇಲಿಯನ್ ಫುಟ್‍ಬಾಲ್ ಇವು ಫುಟ್‍ಬಾಲ್ ಆಟದ ಕೆಲವು ಪ್ರಭೇದಗಳು. ಭಾರತದಲ್ಲಿ ಆಡುವ ಫುಟ್‍ಬಾಲ್ ಆಟದ ನಿಯಮಗಳು ಸಾಕರ್ ಆಟದ ನಿಯಮಗಳನ್ನೇ ಹೆಚ್ಚು ಹೋಲುತ್ತವೆ.

	ಫುಟ್‍ಬಾಲ್ ಆಟದ ಮೈದಾನ ಆಯಾಕಾರವುಳ್ಳದ್ದು; ಉದ್ದ 90 ಮೀ 120 ಮೀ.ಅಗಲ 45ಮೀ-90ಮೀ. ಗೋಲ್ ವಿಸ್ತೀರ್ಣ 18.30ಮೀ - 5.50ಮೀ. 7.32ಮೀ ಅಂತರದಲ್ಲಿ 2.44ಮೀ ಎತ್ತರದ ಕಂಬಗಳು ಗೋಲ್ ಕಂಬಗಳು. ಇವುಗಳ ತುದಿಯಲ್ಲಿ ಒಂದು ಅಡ್ಡ ಕೋಲು ಉಂಟು. ಮೈದಾನದ ಎರಡೂ ಪಾಶ್ರ್ವಗಳಲ್ಲಿರುವ ಗೆರೆಗಳನ್ನು ಬದಿಗೆರೆಗಳೆಂದೂ (ಸೈಡಲೈನ್ಸ್) ತುದಿಗಳಲ್ಲಿರುವ ಗೆರೆಗಳನ್ನು ಗೋಲ್ ಗೆರೆಗಳೆಂದೂ ಕರೆಯುತ್ತಾರೆ. ಮಧ್ಯಭಾಗದಲ್ಲಿ ಮಧ್ಯಗೆರೆ ಉಂಟು. ಇದು ಗೋಲ್‍ಗೆರೆಗಳಿಗೆ ಸಮಾಂತರವಾಗಿದೆ. ಮಧ್ಯಗೆರೆಯ ನಡುವಿನಲ್ಲಿ 9.15 ಮೀ. ತ್ರಿಜ್ಯದ ವೃತ್ತ ಉಂಟು. ಆಟಕ್ಕಾಗಿ 68-71 ಸೆಂ.ಮೀ. ಸುತ್ತಳತೆಯ 14-16 ಔನ್ಸ್ ತೂಕವಿರುವ ಚೆಂಡನ್ನು ಉಪಯೋಗಿಸುವರು. ಇದರೊಳಗೆ ರಬ್ಬರಿನ ಬ್ಲಾಡರ್ ಉಂಟು.

	ಆಟದಲ್ಲಿ ಎರಡು ತಂಡಗಳಿರುತ್ತವೆ. ಪ್ರತಿಯೊಂದರಲ್ಲೂ 11 ಮಂದಿ ಆಟಗಾರರು. ಚೆಂಡನ್ನು ತಮ್ಮ ತಂಡಕ್ಕೆ ಸೇರಿದ ಆಟಗಾರರಲ್ಲೇ ದಾಟಿಸುತ್ತ ಕಡೆಗೊಮ್ಮೆ ಎದುರು ಕಡೆಯ ಗೋಲಿನೊಳಗೆ ದೂಡುವುದು ಆಟದ ಮುಖ್ಯ ಉದ್ದೇಶ. ಆಟಗಾರರ ಉಡುಪು ಸ್ಪೋಟ್ರ್ಸ್ ಷರ್ಟ್ ಅಥವಾ ಬನಿಯನ್, ಷರಾಯಿ ಅಥವಾ ಚಡ್ಡಿ. ಕಾಲಿಗೆ ಕಾಲುಚೀಲ ಮತ್ತು ಬೂಟುಗಳು. ಇವುಗಳ ಅಟ್ಟೆಯಲ್ಲಿ ಮತ್ತು ಹಿಮ್ಮಡಿಯಲ್ಲಿ ಚಿಕ್ಕ ಚಿಕ್ಕ ಗುಂಡನೆಯ ಅಂದರೆ ಗುಬ್ಬಿ ಮೊಳೆ ಇರಬಹುದು ಅಥವಾ ಇಲ್ಲದಿರಬಹುದು. ಕೆಲವು ಆಟಗಾರರು ಕಾಲುಚೀಲದೊಳಗೆ ಮೊಣಕಾಲ ಕಾಪನ್ನು ಉಪಯೋಗಿಸುವುದಿದೆ. ಗೋಲ್‍ಕೀಪರ್‍ಗಳು (ಗೋಲ್ ರಕ್ಷಕರು) ಕೈಚೀಲಗಳನ್ನು ತೊಟ್ಟಿರುತ್ತಾರೆ.

ತಂಡದ ನಾಯಕರು ಮೈದಾನದಲ್ಲಿ ತಮಗೆ ಬೇಕಾದ ಬದಿಯನ್ನು ಆರಿಸಿ ಕೊಳ್ಳಲು ನಾಣ್ಯವನ್ನು ಟಾಸ್ ಮಾಡುತ್ತಾರೆ. ಬಳಿಕ ಆಟಗಾರರು ಆಟ ಆರಂಭವಾಗುವ ಮೊದಲು ತಮ್ಮ ತಮ್ಮ ಸ್ಥಳಗಳಲ್ಲಿ ನಿಲ್ಲುವರು. (1) ಗೋಲ್ ಕೀಪರ್, (2) ರೈಟ್ ಫುಲ್‍ಬ್ಯಾಕ್, (3) ಲೆಫ್ಟ್ ಫುಲ್‍ಬ್ಯಾಕ್, (4)ರೈಟ್ ಹಾಫ್‍ಬ್ಯಾಕ್, (5) ಸೆಂಟರ್ ಹಾಫ್ ಬ್ಯಾಕ್, (6) ಲೆಫ್ಟ್ ಹಾಫ್‍ಬ್ಯಾಕ್ (7) ಔಟ್ ಸೈಡ್‍ರೈಟ್, (8) ಇನ್‍ಸೈಡ್ ರೈಟ್, (9) ಸೆಂಟರ್ ಫಾರ್‍ವರ್ಡ್, (10) ಇನ್‍ಸೈಡ್ ಲೆಫ್ಟ್ ಮತ್ತು (11) ಔಟ್ ಸೈಡ್‍ಲೆಫ್ಟ್. ಗೋಲ್‍ಕೀಪರ್ ಗೋಲು ಕಂಬಗಳ ಮಧ್ಯೆ ನಿಂತಿರುತ್ತಾನೆ. ಒಬ್ಬ ರೆಫೆರೀ (ತೀರ್ಪುಗಾರ) ಇರುತ್ತಾನೆ.

	ಆಟ ತೊಡಗುವ ಮೊದಲು ಚೆಂಡನ್ನು ಮೈದಾನದ ಮಧ್ಯದಲ್ಲಿ ಇಡುತ್ತಾರೆ. ರೆಫೆರೀ ಸಿಲ್ಪಿ ಊದಿದಾಗ ಆಟದ ಆರಂಭ. ಟಾಸ್ ಗೆದ್ದ ತಂಡದ ಮೊದಲನೆಯ ಸಾಲಿನ ಮಧ್ಯದ ಆಟಗಾರ ಚೆಂಡನ್ನು ಒದೆದು ಆಟವನ್ನು ಆರಂಭಿಸುತ್ತಾನೆ. ಇವನು ಚೆಂಡನ್ನು ಒದೆಯುವ ಮೊದಲು ಎದುರು ಪಕ್ಷದವರೆಲ್ಲ ಇವನಿಂದ ಸುಮಾರು 9.15 ಮೀ. ದೂರದಲ್ಲಿ ಪರಸ್ಪರ ಎದುರಾಗಿ ನಿಂತಿರುತ್ತಾರೆ. ಒದೆದ ಚೆಂಡು ಮುಂದೆ ಹೋದ ಕೂಡಲೇ ಆಟಗಾರರು ಪರಸ್ಪರ ಸಹಕಾರದೂಡನೆ ಚೆಂಡನ್ನು ಒಬ್ಬರಿಂದೊಬ್ಬರಿಗೆ ದಾಟಿಸುತ್ತಾರೆ. ಚೆಂಡನ್ನು ದಾಟಿಸಿದ ಬಳಿಕ ಮತ್ತೆ ಸರಿಯಾದ ಸ್ಥಾನಕ್ಕೆ ಬಂದು ಚೆಂಡನ್ನು ಪಡೆಯಲು ಸಿದ್ದರಾಗುತ್ತಾರೆ. ಯಾವುದಾದರೊಂದು ತಂಡದ ಆಟಗಾರರು ಎದುರುಪಕ್ಷದ ಗೋಲಿನೊಳಗೆ ಚೆಂಡನ್ನು ದೂಡಿದರೆ, ಚೆಂಡನ್ನು ಮತ್ತೆ ಆಟದ ಮೈದಾನದ ಮಧ್ಯಭಾಗದಲ್ಲಿಟ್ಟು ಆಟ ಆರಂಭಿಸಬೇಕು. ಗೋಲು ಹೊಡೆಸಿಕೊಂಡ ತಂಡಕ್ಕೆ ಚೆಂಡನ್ನು ಒದೆಯುವ ಹಕ್ಕು ದೊರಕುತ್ತದೆ. ಆಟಗಾರ ಚೆಂಡನ್ನು ಒದೆದಾಗ, ಚೆಂಡು ಗೋಲಿನೊಳಗೆ ಹೋಗದೆ ಗೋಲ್ ಗೆರೆಯನ್ನು ದಾಟಿ ಹೋದರೆ, ಗೋಲನ್ನು ರಕ್ಷಿಸುವ ತಂಡದವರು ಒಂದು ಫ್ರೀಕಿಕ್ ಮಾಡಬಹುದು. ಆಕ್ರಮಣ ತಂಡದವರಿಗೆ ಕಾರ್ನರ್ ಕಿಕ್ ಹೊಡೆಯುವ ಅವಕಾಶ ಸಿಗುವುದು ರಕ್ಷಣಾತಂಡದ ಆಟಗಾರ ಆಡಿದ ಚೆಂಡು ಗೋಲ್‍ಗೆರೆಯನ್ನು ದಾಟಿದಾಗ ಮಾತ್ರ. ಆಕ್ರಮಣತಂಡದ ಆಟಗಾರ ಚೆಂಡು ಹಾದು ಹೋದ ಮೂಲೆಯಲ್ಲಿ ನಿಂತು ಕಾರ್ನರ್ ಕಿಕ್ ಮಾಡುತ್ತಾನೆ. ಆಗ ನೇರವಾಗಿ ಚೆಂಡನ್ನು ಗೋಲ್ ಸರಹದ್ದಿಗೆ ದೂಡಲು ಸಾಧ್ಯವಾಗುವುದು.

	ಆಟ ನಡೆಯುತ್ತಿರುವಾಗ ಮೈದಾನದ ಎಲ್ಲೆಯನ್ನು ಮೀರಿ ಚೆಂಡು ಹೊರಗೆ ಹೋಗುವಂತೆ ಆಡಿದ ಆಟಗಾರನ ತಂಡಕ್ಕೆ ಶಿಕ್ಷೆಯುಂಟು. ಚೆಂಡು ಬದಿಗೆರೆಯನ್ನು ದಾಟಿ ಹೊರಗೆ ಹೋಗಿದ್ದರೆ ಎದುರು ಪಕ್ಷದ ಆಟಗಾರನೊಬ್ಬ, ಚೆಂಡು ಗೆರೆಯನ್ನು ಎಲ್ಲಿ ದಾಟಿತೋ ಆ ಜಾಗದಿಂದ ಚೆಂಡನ್ನು ಮೈದಾನದೊಳಕ್ಕೆ ಎಸೆಯುತ್ತಾನೆ. ಗೋಲ್ ಕೀಪರ್ ಅಲ್ಲದ ಆಟಗಾರನೊಬ್ಬ ಈ ವೇಳೆ ಮಾತ್ರ ಚೆಂಡನ್ನು ಕೈಗಳಿಂದ ಮುಟ್ಟಬಹುದಾಗಿದೆ. ಇವನು ತನ್ನ ಎರಡೂ ಕೈಗಳಲ್ಲಿ ಚೆಂಡನ್ನು ಹಿಡಿದು ಕೈಗಳನ್ನು ತಲೆಯ ಮೇಲೆ ಮತ್ತು ಹಿಂದಕ್ಕೆ ಚಾಚಿ ತನ್ನ ತಂಡಕ್ಕೆ ಸೇರಿದ ಆಟಗಾರನೊಬ್ಬನಿಗೆ ಬೀಸಿ ಎಸೆಯುತ್ತಾನೆ. ಹೀಗೆ ಆಟ ಮುಂದುವರಿಯುತ್ತದೆ.

	ಆಟಗಾರರು ಎದುರಾಳಿಗಳನ್ನು ಬೀಳಿಸುವುದು, ಒದೆಯುವುದು, ತಳ್ಳುವುದು ಮುಂತಾದವನ್ನು ಗೋಲ್ ವಿಸ್ತಿರ್ಣದ ಸರಹದ್ದಿನಲ್ಲಿ ಮಾಡಿದರೆ, ಸಂಬಂಧಿಸಿದ ಆಟದ ತಂಡದವರಿಗೆ ರೆಫೆರೀ ಪೆನಾಲ್ಟಿ ಕಿಕ್ ವಿಧಿಸುತ್ತಾನೆ. ಪೆನಾಲ್ಟಿ ನೆಲೆಯಿಂದ ಚೆಂಡನ್ನು ಗೋಲಿನ ಕಡೆಗೆ ಎದುರು ಪಕ್ಷದ ಆಟಗಾರ ಒದೆಯುತ್ತಾನೆ. ಆಗ ಗೋಲಿನ ರಕ್ಷಣೆಗೆ ಗೋಲ್ ಕೀಪರ್ ಮಾತ್ರ ಇರುತ್ತಾನೆ.

	ಫುಟ್‍ಬಾಲ್ ಆಟದಲ್ಲಿ ಚೆಂಡನ್ನು ಕಾಲಿನಿಂದ ಒದೆಯುವುದು ಮಾತ್ರವಲ್ಲದೆ, ತಲೆಯನ್ನು ಒಡ್ಡಿ ಚೆಂಡನ್ನು ಪುಟಿಸಬಹುದು, ಎದೆಯಿಂದ ತಡೆಯಬಹುದು ಆದರೆ ಚೆಂಡಿಗೆ ಕೈಗಳನ್ನು ತಾಗಿಸುವುದು ಮಾತ್ರ ನಿಷಿದ್ಧ. ಗೋಲ್ ಕೀಪರಿಗೆ ಈ ನಿಯಮ ಅನ್ವಯಿಸದು. ಆದರೆ ಇವನು ಚೆಂಡನ್ನು ಹಿಡಿದುಕೊಂಡು ನಾಲ್ಕು ಹೆಜ್ಜೆಗಳಿಗಿಂತ ಮುಂದೆ ನಡೆಯಬಾರದೆಂಬ ನಿಯಮವಿದೆ. ಗೋಲ್‍ಕೀಪರ್ ಚೆಂಡನ್ನು ಹಿಡಿದು ಗೋಲ್ ಕಂಬಗಳ ಮಧ್ಯದಲ್ಲಿ ಗೆರೆಯನ್ನು ದಾಟಿ ಹಿಂದಕ್ಕೆ ನಡೆದರೆ ಎದುರಾಳಿಗಳು ಗೋಲನ್ನು ಹೊಡೆದರೆಂದೇ ಪರಿಗಣಿಸಲಾಗುತ್ತದೆ. 

	ಫುಟ್‍ಬಾಲ್ ಆಟದ ಅವಧಿ 90 ಮಿನಿಟುಗಳು. 45 ಮಿನಿಟುಗಳ ಆಟದ ತರುವಾಯ 5-10 ಮಿನಿಟುಗಳು ವಿರಾಮ ಉಂಟು. ಇದಾದ ಬಳಿಕ ತಂಡದ ಆಟಗಾರರು ಮೈದಾನದಲ್ಲಿ ತಮ್ಮ ಬದಿಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾರೆ. ಹೀಗೆ ಆಟ ಮುಂದುವರಿಯುತ್ತದೆ. ಆಟದ ಕೊನೆಯಲ್ಲಿ ಯಾವ ತಂಡ ಹೆಚ್ಚು ಗೋಲುಗಳನ್ನು ಹೊಡೆದಿರುವುದೋ ಅದು ಗೆಲ್ಲುತ್ತದೆ.

	1930ರಲ್ಲಿ ವಿಶ್ವಕಪ್ ಫುಟ್‍ಬಾಲ್ ಟೂರ್ನಿ (ಜೂಲ್ಸ್ ರಿಮೆಟ್ ಟ್ರೋಫಿ) ಉರುಗ್ವೇ ದೇಶದ ರಾಜಧಾನಿ ಮಾಂಟೆವಿಡಿಯೋವಿನಲ್ಲಿ ಆರಂಭವಾಯಿತು. ನಾಲ್ಕು ವರ್ಷಗಳಿಗೊಮ್ಮೆ ಬೇರೆ ಬೇರೆ ದೇಶಗಳಲ್ಲಿ ನಡೆಯುವ ಈ ಟೂರ್ನಿ ಪ್ರಪಂಚ ಯುದ್ಧಗಳ ಕಾರಣ ಎರಡು ಬಾರಿ (1942 ಮತ್ತು 1946) ನಡೆಯಲಿಲ್ಲ. ಈ ತನಕ (1982) ಹನ್ನೆರಡು ಸಲ ನಡೆದಿರುವ ವಿಶ್ವಕಪ್ ಫುಟ್‍ಬಾಲ್ ಪಂದ್ಯಗಳಲ್ಲಿ ಇಟಲಿ ಮತ್ತು ಬ್ರೆಜಿûಲ್ ದೇಶಗಳು ತಲಾ ಮೂರು ಬಾರಿ ಪ್ರಶಸ್ತಿ ಗಳಿಸಿವೆ.

	1982ರ ಫುಟ್‍ಬಾಲ್ ಪಂದ್ಯಗಳಲ್ಲಿ ಆಡಿದ ಅತ್ಯುತ್ತಮ ಆಟಗಾರರೆಂದರೆ ಇಟಲಿಯ ಪಾಲೊರಾಸಿ ಮತ್ತು ಬ್ರೆಜಿûಲಿನ ರೊಬರ್ಟೊ ಫಲಾಕೊ.

	ಪಾಶ್ಚಾತ್ಯ ರಾಷ್ಟ್ರಗಳಲ್ಲಿ (ವಿಶೇಷವಾಗಿ ಇಂಗ್ಲೆಂಡ್) ವೃತ್ತಿನಿರತ ಫುಟ್‍ಬಾಲ್ ತಂಡಗಳಿವೆ. ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿರುವ ಫುಟ್‍ಬಾಲ್ ಆಟಗಾರರೂ ಇದ್ದಾರೆ. ಬ್ರೆಜಿಲಿನ ಪೀಲೆ ಅಂಥವರಲ್ಲಿ ಒಬ್ಬರು. ಇವರು ಫುಟ್‍ಬಾಲ್ ರಂಗದ ಸಾರ್ವಭೌಮ. ರಾಣಿ ಎರಡನೆಯ ಎಲಿಜûಬೆತ್ ಅವರಿಂದ 1968ರಲ್ಲಿ ನೈಟ್ ಪದವಿ ಪಡೆದಿರುವ ಸ್ಟಾನ್ಲಿ ಮ್ಯಾಥ್ಯಾಸ್ ಮತ್ತೊಬ್ಬ ವೃತ್ತಿನಿರತ ಫುಟ್‍ಬಾಲ್ ಆಟಗಾರ. ಟಾಮಿ ಹಾರ್ಮರ್, ಜಾನ್ ಚಾಲ್ರ್ಸ್, ಮರ್ಸಿರ್, ಸ್ಕಾಟ್, ಡಂಕನ್ ಎಡ್ವಡ್ರ್ಸ್, ಷಕಲ್ಟನ್, ಜಿಮ್ಮಿ ಗ್ರೀವ್ಸ್, ಡೇನಿಸ್ ಲಾ, ಬಾಬ್ಬಿ ಚಾರ್ಲ್‍ಟನ್, ಟಾಮ್ಮಿ ಲಾಟನ್ ಪೀಟರ್ ಡೋಹರ್ಟಿ ಮೊದಲಾದವರು ಖ್ಯಾತ ಫುಟ್‍ಬಾಲ್ ಆಟಗಾರರು. ನಮ್ಮ ದೇಶದಲ್ಲಿ ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟಗಳಲ್ಲಿ ಫುಟ್‍ಬಾಲ್ ಆಡುವ ಅನೇಕ ಮಂದಿ ಉತ್ತಮ ಆಟಗಾರರಿದ್ದಾರೆ. ಇವರ ಪೈಕಿ ಪಿ. ಕೆ. ಬ್ಯಾನರ್ಜಿ, ರಾಮಸ್ವಾಮಿ ಮೊದಲಾದವರು ಉತ್ತಮ ಆಟಗಾರರು

	ಫುಟ್‍ಬಾಲ್ ಈಗ ಕೆಲವು ನಿರ್ದಿಷ್ಟ ನಿಯಮಗಳಿಗೆ ಒಳಪಟ್ಟ ಆಟ. ಮೊದಲು ಪುರುಷರಿಗೆ ಮಾತ್ರ ಮೀಸಲಾಗಿದ್ದ ಈ ಆಟವನ್ನು ಈಗ ಮಹಿಳೆಯರೂ ಆಡುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುದ್ವೀಪಗಳ ಬೆಳಕಿನಲ್ಲಿ ಆಡುವ ಆಟ ವಿಶೇಷ ಆಕರ್ಷಣಿಯದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ